ಬದನವಾಳು ಸತ್ಯಾಗ್ರಹ ಪ್ರಣಾಳಿಕೆ

ಶ್ರಮಸಹಿತ ಸರಳಬದುಕನ್ನು ಜಾರಿಗೊಳಿಸುವುದು ಸತ್ಯಾಗ್ರಹದ ಉದ್ದೇಶವಾಗಿದೆ. ಶ್ರಮಸಹಿತ ಸರಳಬದುಕು ಮಾತ್ರವೇ ಸುಸ್ಥಿರಬದುಕು ಎಂಬ ನಂಬಿಕೆಯಿಂದ ಸತ್ಯಾಗ್ರಹ ನಡೆದಿದೆ.

ಈವರೆಗೆ ಶ್ರಮಸಹಿತ ಬದುಕೆಂಬುದು ಒಂದು ಆಯ್ಕೆಯಾಗಿತ್ತು, ಉತ್ತಮ ಬದುಕಿನ ಆಯ್ಕೆಯಾಗಿತ್ತು, ಬುದ್ಧ ಬಸವಣ್ಣರು ಸೂಚಿಸಿದ ಆಯ್ಕೆಯಾಗಿತ್ತು. ಈಗ ಅದು ಕೇವಲ ಆಯ್ಕೆಯಾಗಿ ಉಳಿದಿಲ್ಲ, ಅದೊಂದು ಅನಿವಾರ್ಯತೆಯಾಗಿದೆ. ಹಾಗೆಂದು ವಿಜ್ಞಾನಿಗಳು ಹೇಳತೊಡಗಿದ್ದಾರೆ. ಶ್ರಮಸಹಿತ ಸರಳಬದುಕಿಗೆ ಹೊರಳುವ ಆಸ್ಪದವಿರುವಾಗಲೇ ಹೊರಳುವುದು ಒಳ್ಳೆಯದು, ತಡಮಾಡಿದರೆ ಮನುಕುಲವೇ ನಾಶಹೊಂದುವ ದಟ್ಟಸಾಧ್ಯತೆಗಳಿವೆ ಎಂದು ಅವರು ಹೇಳುತ್ತಿದ್ದಾರೆ. ವಾತಾವರಣದ ಏರುಪೇರು, ಪೃಥ್ವಿಯ ಬಿಸಿಯೇರುವಿಕೆ, ಇತ್ಯಾದಿ ಸೂಚನೆಗಳು ವಿಜ್ಞಾನಿಗಳ ನಿದ್ದೆಗೆಡಿಸಿವೆ.

ಇಂದಿನ ಜೀವನಶೈಲಿಯನ್ನು ಸುಲಭತೆಯ ಪರಮಾವಧಿ ಎಂದು ಕರೆಯಬಹುದಾಗಿದೆ. ಸುಲಭ ಜೀವನಶೈಲಿಯು ನಿಜಕ್ಕೂ ಸುಲಭವೇ, ಸುಲಭತೆಗಾಗಿ ನಾವು ತೆರುತ್ತಿರುವ ಬೆಲೆ ಎಷ್ಟು, ಇಂಬಿತ್ಯಾದಿ ಗಂಭೀರ ಪ್ರಶ್ನೆಗಳು ನಮ್ಮೆದುರಿಗಿವೆ. ಅದೇನೇ ಇರಲಿ ಸುಲಭತೆಯ ಆಕರ್ಷಣೆಯು ಅದೆಷ್ಟು ಗಾಢವಾಗಿದೆಯೆಂದರೆ, ಬಡವರೂ ಹಾಗೂ ಶ್ರಮಿಕರೂ ಸಹ ಸುಲಭತೆಯ ಆಸೆಗೆ ಬಲಿಬಿದ್ದು ಅಸಹನೀಯ ಕಷ್ಟಗಳಿಗೆ ಗುರಿಯಾಗುತ್ತಿದ್ದಾರೆ.

ಮಾನವರಿಗೆ ಈಪಾಟಿ ಸುಲಭತೆ ದಕ್ಕಿದ್ದು ಆಧುನಿಕ ಯುಗದಲ್ಲಿ, ತಂತ್ರಜ್ಞಾನದ ಅಸಾಧಾರಣ ಬೆಳವಣಿಗೆಯ ಕಾರಣದಿಂದಾಗಿ. ಆದರೆ ಈ ಸುಲಭತೆ ಅಸಹಜವಾದದ್ದು, ಹಾಗೂ ತಾತ್ಕಾಲಿಕವಾದದ್ದು. ಸೀಮಿತವದ ಶಕ್ತಿಮೂಲವೊಂದು – ತೈಲ ಗ್ಯಾಸು ಹಾಗೂ ಕಲ್ಲಿದ್ದಲು, ಒಮ್ಮೆಗೇ ಲಭ್ಯವಾದದ್ದರಿಂದ ಸಾಧ್ಯವಾದ ಅಸಹಜ ಅಭಿವೃದ್ಧಿಯಿದು. ಈಗ ಶಕ್ತಿಮೂಲ ಕರಗುತ್ತಿದೆ, ತೈಲ ಸಂಗ್ರಹವು ಅರ್ಧಕ್ಕಿಂತ ಮಿಗಿಲಾಗಿ ಕರಗಿಹೋಗಿದೆ.

ಆಧುನಿಕ ಅಭಿವೃದ್ಧಿಯ ಕೇಂದ್ರದಲ್ಲಿ ತೈಲವಿದೆ. ಯಂತ್ರ ನಾಗರೀಕತೆಯನ್ನು ತೈಲ ನಾಗರೀಕತೆ ಎಂದು ಸಹ ಹಲವರು ಕರೆದಿದ್ದಾರೆ. ತೈಲಭಾವಿಗಳು ತುಂಬಿತುಳುಕುತ್ತಿದ್ದಾಗ, ಸರಿಸುಮಾರು 1960ರ ತನಕ, ಒಂದುರೂಪಾಯಿ ಖರ್ಚುಮಾಡಿದರೆ ನೂರುರೂಪಾಯಿ ಮೌಲ್ಯದ ಇಂಧನವು, ಭೂಮಿಯಿಂದ ಹೊರಬಂದು, ಸಂಸ್ಕರಣಗೊಂಡು, ಬಳಕೆಗೆ ಲಭ್ಯವಾಗುತ್ತಿತ್ತು. ಹೀಗೆ ಲಭ್ಯವಾದ ಕಡಿಮೆ ಬೆಲೆಯ ಇಂಧನದಿಂದಾಗಿ ಯಂತ್ರಗಳು ಚಲಿಸಿದವು, ದೂರಗಳು ಕ್ರಮಿಸಿದವು, ಹಸಿರುಕ್ರಾಂತಿ ನಡೆಯಿತು, ಯೂರಿಯಾ ಲಭ್ಯವಾಯಿತು, ಪ್ಲಾಸ್ಟಿಕ್ ಲಭ್ಯವಾಯಿತು, ಕೈಗಾರಿಕೆಗಳು ಧುತ್ತೆಂದು ಮೇಲೆದ್ದವು, ಮಹಾನಗರಗಳು ಮೇಲೆದ್ದವು, ಮಾನವನ ರೂಪ ಭಾಷೆ ವ್ಯವಹಾರ ರೀತಿ-ನೀತಿಗಳೆಲ್ಲ ಬದಲಾದವು. ನಾವು ಚಂದ್ರನತ್ತ ನೆಗೆದೆವು, ಮಂಗಳನತ್ತ ನೆಗೆದೆವು, ನಮ್ಮನ್ನು ಬಿಟ್ಟರಿಲ್ಲ ಎಂಬ `ಅಹಂಕಾರ’ ಮಾನವರಲ್ಲಿ ಬೇರೂರಿತು. ಈಗ ಇಳಿತಾಯದ ಯುಗ ಆರಂಭವಾಗಿದೆ. ನಮ್ಮ ಕಾಲ್ಕೆಳಗಿನ ನೆಲ ಅದುರತೊಡಗಿದೆ.

2008 ನಿರ್ಣಾಯಕ ವರ್ಷ. ಇಲ್ಲಿಂದಾಚೆಗೆ ತೈಲ ನಿಕ್ಷೇಪಗಳು ಅರ್ಧಕ್ಕಿಂತ ಹೆಚ್ಚು ಖಾಲಿಯಾಗಿವೆ ಎಂಬುದು ವಿಜ್ಞಾನಿಗಳ ಆಂಬೋಣ. ಏನೀಗ ಇನ್ನೂ ಉಳಿದಿದೆಯಲ್ಲ ಎಂದು ನೀವನ್ನಬಹುದು. ಭಾವಿಯಿಂದ ತೈಲ ಹೊರಗೆಳೆಯುವುದು ಅಷ್ಟು ಸುಲಭವಿಲ್ಲ. ತೈಲ ಕಡಿಮೆಯಾದಂತೆಲ್ಲ, ತೈಲ ಹೊರತೆಗೆಯುವ ಖರ್ಚು ಹೆಚ್ಚತೊಡಗುತ್ತದೆ, ಕೆಲವರ್ಷಗಳಲ್ಲಿ ತೈಲ ಹೊರತೆಗೆಯುವುದು ನಷ್ಟದಾಯಕ ಉದ್ದಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಕಲ್ಲಿದ್ದಲು ಹೆಚ್ಚಿಗೆ ಕಾಲ ಉಳೀದಿತಾದರೂ, ವಿಪರೀತ ಇಂಗಾಲಾಮ್ಲ ಉಗುಳುತ್ತದಾದ್ದರಿಂದ, ಹೆಚ್ಚು ಉಪಯುಕ್ತ ಇಂಧನ ಮೂಲವಲ್ಲ. ಮಿಕ್ಕಂತೆ ಅಣುಶಕ್ತಿ ಗಾಳಿಶಕ್ತಿ ಸೂರ್ಯಶಕ್ತಿ ಇತ್ಯಾದಿ ಎಲ್ಲ ಶಕ್ತಿಮೂಲಗಳೂ ಸೀಮಿತವಾದವುಗಳು. ಹೌದು! ಶ್ರಮಸಹಿತ ಸರಳಬದುಕಿಗೆ ಮರಳದೆ ಮಾನವರಿಗೆ ಗತ್ಯಂತರವಿಲ್ಲ.

ಮಾನವರ ಮೇಲೆ ನಿಸರ್ಗ ಹೇರುತ್ತಿರುವ ಬಲವಂತವಿದು. ಈಗಲೇ ಎಚ್ಚೆತ್ತುಕೊಳ್ಳೋಣ, ಸಂತೋಷದಿಂದ ಸರಳಬದುಕಿಗೆ ಹೊರಳೋಣ ಎಂದು ಬದನವಾಳು ಸತ್ಯಾಗ್ರಹ ಹೇಳುತ್ತದೆ. ಸ್ವ-ಇಚ್ಚೆಯಿಂದ ಶ್ರಮಸಹಿತ ಸರಳಬದುಕನ್ನು ಅಪ್ಪಿಕೊಳ್ಳುವ ಕಾರ್ಯಕ್ರಮ ಇದಾಗಿದೆ. ಸರಳತೆ ಹಾಗೂ ಸುಸ್ಥಿರತೆಯ ಕಡೆಗೆ, ಹಂತಹಂತವಾಗಿ ತೆರಳುವ ನೈತಿಕತೆಯ ದಾರಿ ಕೂಡ ಇದೇ ಆಗಿದೆ. ಪ್ರಕೃತಿಗೆ ಹತ್ತಿರವಾಗುವುದು ಒಳಿತಿನ ಹಾದಿ. ಶ್ರಮದಿಂದ ಬಾಳುವುದು ಒಳಿತಿನ ಹಾದಿ. ಸಮಾನತೆ ಹಾಗೂ ಸಹಕಾರದಿಂದ ಬಾಳುವುದು ಒಳಿತಿನ ಹಾದಿ.

ಸತ್ಯಾಗ್ರಹದ ಘೋಷಣೆಗಳು

ಕೈಮಗ್ಗ ವಸ್ತ್ರವು ನಾಳಿನ ವಸ್ತ್ರವಾಗಿದೆ.

ಪಾರಂಪರಿಕ ಕೃಷಿಯು ನಾಳಿನ ಕೃಷಿಯಾಗಿದೆ.

ಮಾತೃಭಾಷೆ ನಾಳಿನ ಭಾಷೆಯಾಗಿದೆ.

ವಿಕೇಂದ್ರಿಕರಣವು ನಾಳಿನ ರಾಜಕರಣವಾಗಿದೆ.

ಇಂದಿನ ಸಂಪನ್ಮೂಲವನ್ನು ನಾಳಿನಕೈಗಾರಿಕೆ ಹಾಗೂ ನಾಳಿನಕೃಷಿಗಾಗಿ ತೊಡಗಿಸಿರೆಂದು ಸತ್ಯಾಗ್ರಹವು ಕರೆಕೊಡುತ್ತದೆ.

ಜ್ಞಾನ ವಿಜ್ಞಾನ ಶಿಕ್ಷಣ ರಾಜಕಾರಣ ಅಧಿಕಾರ ಎಲ್ಲವೂ ಸುಸ್ಥಿರಬದುಕಿನ ನಿರ್ಮಾಣಕ್ಕಾಗಿ ಬಳಕೆಯಾಗಲಿ ಎಂದು ಸತ್ಯಾಗ್ರಹವು ಕರೆಕೊಡುತ್ತದೆ.

ಯಂತ್ರನಾಗರೀಕತೆಯನ್ನು ಜಾಣತನದಿಂದ, ಜಾಗರೂಕತೆಯಿಂದ, ಹಾಗೂ ಸಾಧ್ಯವಿದ್ದಷ್ಟೂ ಜನರಿಗೆ ನೋವಾಗದಂತೆ, ಕಳಚಬೇಕೆಂದು ಸತ್ಯಾಗ್ರಹವು ಕರೆಕೊಡುತ್ತದೆ. 

Download the printable file here:

Badanaval Satyagraha – Manifesto – Kannada

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s